<ನಳಚರಿತ್ರೆ
ನಳಚರಿತ್ರೆ:ಆರನೆಯ ಸಂಧಿ (ಸಂಗ್ರಹ)

ಆರನೆಯ ಸಂಧಿ
ಸೂಚನೆ|ಇಂದುವದನೆಯನಗಲಿ ತಾ ಮನ 
ನೊಂದು ಕಾರ್ಕೋಟಕನ ದೆಸೆಯಲಿ 
ಬಂದು ಹೊಕ್ಕನು ನಿಷಧಪತಿ ಋತುಪರ್ಣನಗರಿಯನು|| 
ಕೇಳು ಕುಂತೀತನಯ ನಿಷಧನೃ 
ಪಾಲನಿತ್ತಲು ಮರೆದು ಮಲಗಿದ 
ಬಾಲಕಿಯ ಬಿಟ್ಟಡವಿಯಲಿ ಹೊರವಂಟನಾ ವನವ 
ಕಾಲವಾವನ ಕೀಳು ಮಾಡದು 
ಶೂಲಪಾಣಿಯೆ ಬಲ್ಲ ನಳ ಭೂ 
ಪಾಲಕನ ವಿಧಿಯೇನನೆಂಬೆನು ಬಂದನಡವಿಯಲಿ ||೧||
`
ವನಿತೆ ಮಲಗಿಹಳೋ ಅಧೈರ್ಯದಿ 
ನೆನೆವಳೋ ದೈವವನು ನಿದ್ರೆಯ 
ಕನಸ ಕಂಡೇಳುವಳೊ ಕಾಣದೆ ಹಲವ ಹಂಬಲಿಸಿ 
ಕನಲಿ ವಿಧಿಯನು ಬೈವಳೋ ಕಂ 
ಬನಿಯ ಸುರಿವಳೊ ಶೋಕದಲಿ ನಿಜ 
ತನುವ ಬಿಡುವಳೊ ಕಾಂತೆಯೆಂತಿಹಳೆನುತ ನಡೆತಂದ ||೨||
`
ಸುತರ ಪರರೆಡೆಗಿತ್ತು ನಂಬಿದ 
ಸತಿಯ ತಂದಡವಿಯಲಿ ಮಲಗಿಸಿ 
ಮತಿವಿಕಳನಾದೆನು ಪುರಾಕೃತಕರ್ಮಫಲವೈಸೆ 
ಕ್ಷಿತಿಯೊಳಾರುಂಟೆನ್ನವೊಲ್ ನಿಜ 
ಸತಿಗೆ ತಪ್ಪಿದ ಬಾಹಿರನುಯೆಂ 
ದತಿಶಯದ ಶೋಕದಲಿ ನಡೆದನು ಶಿವಶಿವಾಯೆನುತ ||೩||

ಲೋಕದೊಳಗಗ್ಗಳೆಯ ಮಹಿಪರ 
ನೇಕರವರೊಳಗಾರನೊಲ್ಲದೆ 
ನೂಕಿ ತನ್ನನೆ ಒಲಿದು ಕೈಕೊಂಡಳು ಸರೋಜಮುಖಿ 
ಆಕೆಯಗಲಿದ ಪಾತಕನು ತಾ 
ನೇಕೆ ಧರೆಯೊಳು ಶಿವಶಿವಾಯೆಂ 
ದಾ ಕಮಲಲೋಚನೆಗೆ ಮರುಗಿದನರಸ ಕೇಳೆಂದ ||೪||

ಈ ಪರಿಯೊಳತಿಶೋಕದಿಂದ ಪ್ರ 
ಳಾಪಿಸುವ ನಳನೃಪತಿ ಹೆಚ್ಚಿದ 
ತಾಪದಲಿ ಕಡುನೊಂದು ಬಳಲುತ ತನ್ನ ಮನದೊಳಗೆ 
ಶ್ರೀಪತಿಯ ನೆಲೆಗೊಳಿಸಿ ಹೃದಯದ 
ತಾಪದೊಳು ಬರುತಿರಲು ಮುಂದೆ ಸ 
ಮೀಪದಲಿ ಹುತವಹನ ಮಹಿಮೆಯ ಕಂಡನವನೀಶ ||೫||

ಏನನೆಂಬೆನು ನೃಪತಿ ಕಿಚ್ಚಿನ 
ಹಾನಿಯನು ಬನದೊಳಗೆ ಚಲಿಸುತ 
ಭಾನುಮಂಡಲವಡರೆ ಮುಸುಕಿದ ಹೊಗೆಯ ಹೊರಳಿಯಲಿ 
ಕಾನನವನೆಡೆಗೊಂಡ ದಳ್ಳುರಿ 
ಗಾನಲಾಪುದೆ ತರುನಿಕರ ವೈ 
ಮಾನಿಕರು ನಡನಡುಗೆ ಬೆಂದುದು ಸಕಲ ವನಭೂಮಿ ||೬||

ಬಿದಿರ ಮೆಳೆ ಧಗಧಗಿಸೆ ಘನ ಹೆ 
ಬ್ಬಿದಿರು ಛಟಛಟಿರೆನಲು ಉರಿಯೊಳು 
ಕದಳಿಗಳು ಸಿಮಿಸಿಮಿಸೆ ತರುಗಳನುರುಹಿ ಮೆಳೆಗಳಲಿ 
ಗದಗದಿಸೆ ಗುಹೆಗಳಲಿ ಮೃಗತತಿ 
ಬೆದರಿ ಹಾಯ್ದುವು ಪಕ್ಷಿಸಂಕುಲ 
ಉದುರಿದುವು ಗರಿಸಹಿತ ಬೆಂದಾವನದ ಮಧ್ಯದಲಿ ||೭||

ತೆಗೆದು ಹಾಯ್ದುವು ಸಿಂಹ ಶಾರ್ದೂ
ಲಗಳು ಕರಿಗಳ ಹಿಂಡು ನಾನಾ 
ಮೃಗಗಳಗಣಿತ ಬೆಂದು ಬಿದ್ದವು ನಿಮಿಷಮಾತ್ರದಲಿ 
ಚಿಗಿದು ಹಾಯ್ದುವು ಗಂಡಭೇರುಂ
ಡಗಳು ಮೊದಲಾದಖಿಳಮೃಗಪ 
ಕ್ಷಿಗಳು ಕೆಡೆದುವು ಕಿಚ್ಚಿನೊಳಗವನೀಶ ಕೇಳೆಂದ ||೮||

ಪ್ರಳಯಕಾಲದಿ ಸುಡುವ ವಡಬಾ
ನಳನೊಯೆನಲಾ ವನವ ಸುಡುತಲಿ 
ಸುಳಿಸುಳಿಯುತಾಹಾರಗೊಳುತಿರಲಲ್ಲಿ ದನಿಯಾಯ್ತು 
ಸಿಲುಕಿದೆನು ಪಾವಕನೊಳೆನ್ನನು 
ಒಲಿದು ಹಾ ನೃಪಕುಲಶಿರೋಮಣಿ 
ಕಳೆದು ಬಿಡಿಸೈ ಸುಕೃತ ನಿನಗಹುದೆಂದುದಾ ನಿನದ ||೯||

ಆಗಲಾ ದನಿಗೇಳಿ ನೃಪತಿ ಸ 
ರಾಗದಿಂದವೆ ಬಂದು ಹೊಕ್ಕನು 
ಕೂಗಿದವರಾರೆನುತ ಬರುತಿರೆ ಕಂಡನುರಗಪತಿ 
ಪೋಗುತಿದೆಯೆನ್ನಸುವು ಸಲಹು ಷ 
ಡಾಗಮಜ್ಞ ನೃಪಾಲಯೆನಲ
ಭೋಗಿಯನು ಕಂಡರಸ ನೀನಾರೆಂದು ಬೆಸಗೊಂಡ ||೧೦||

ಉರಗಪತಿ ಕಾರ್ಕೋಟಕನು ತಾ 
ನರಸ ಕೇಳೀ ಬನದೊಳಿರುತಿರೆ 
ಪರರಮಋಷಿ ಬಂದೆನ್ನ ತಾಗಿದನಂದು ಭೀತಿಯಲಿ 
ಕರೆದು ಕೊಟ್ಟನು ಶಾಪವನು ಸಂ 
ಚರಿಸದಂತಿರೆಯೆನಗೆಯಿದು ಪರಿ 
ಹರವದೆಂದಿಗೆ ಮುನಿಪ ಕರುಣಿಪುದೆಂದೊಡಿಂತೆಂದ ||೧೧||

ಇರಲಿರಲು ಕಾಲಾಂತರಕೆ ಭೂ 
ವರನು ನಳನೃಪನಿಲ್ಲಿಗೈದುವ 
ಧರಣಿಪನ ಕರಕಮಲ ಸೋಂಕಲು ಶಾಪವಿದು ಬಳಿಕ 
ಪರಿಹರಿಪುದೆನೆ ಮುನಿಯ ವಚನದಿ 
ಬರವ ಹಾರುತ್ತಿರಲು ಬಂದೈ 
ಕರುಣದಿಂದಗ್ನಿಯನು ಪರಿಹರಿಸೆಂದನುರಗಪತಿ ||೧೨||

ಕರುಣದಲಿ ನೃಪ ಭೀತಿಗೊಳ್ಳದೆ 
ಯುರಗಪತಿಯನು ತೆಗೆಯುತನಲನ 
ಉರಿಯ ತಪ್ಪಿಸಿ ಕೊಳದ ತೀರಕೆ ತಂದುಪಚರಿಸೆ 
ಕರವಿಡಿದು ವಿಷವೇರೆ ನೃಪತಿಯ 
ಪರಮತೇಜದ ದೇಹ ಕೆಟ್ಟಿತು ವಿಕೃತರೂಪಾಗಿ ||೧೩||

ದೊಡ್ಡ ಹೊಟ್ಟೆಯ ಗೂನುಬೆನ್ನಿನ 
ಅಡ್ಡ ಮೋರೆಯ ಗಂಟುಮೂಗಿನ 
ದೊಡ್ಡ ಕೈಕಾಲುಗಳ ಉದುರಿದ ರೋಮಮೀಸೆಗಳ 
ಜಡ್ಡು ದೇಹದ ಗುಜ್ಜುಗೊರಲಿನ 
ಗಿಡ್ಡ ರೂಪಿನ ಹರುಕು  ಗಡ್ಡದ 
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ ||೧೪||

ಮಾರನಾಕಾರದ ನೃಪಾಲಕ 
ಕ್ರೂರರೂಪಾದನು ಪುರಾಕೃತ 
ಮೀರಲಾರಳವೆಂದು ನುಡಿದನು ತನ್ನ ಮನದೊಳಗೆ 
ತೋರಮಾಣಿಕವೆಂದು ಪಿಡಿದರೆ 
ಭೂರಿ ಕೆಂಡವಿದಾಯ್ತು ಶಿವಶಿವ 
ಕ್ರೂರಜಂತುಗಳೊಡನೆ ಸಖತನ ಫಲಿಸಿತೆನಗೆಂದ ||೧೫||

ಮುನ್ನಮಾಡಿದ ಕರ್ಮಫಲವಿದು 
ಬೆನ್ನ ಬಿಡದಿರಲುರಗಪತಿ ಕೇ 
ಳಿನ್ನು ನೋಯಲದೇತಕೆ ತಾನೇ ಪಾಪಿಯಾದೆನಲ 
ಪನ್ನಗಾರಿಧ್ವಜನ ಕೃಪೆ ತನ 
ಗಿನ್ನು ತಪ್ಪಿದ ಬಳಿಕ ಲೋಕದೊ 
ಳಿನ್ನು ಸೈರಿಸಲಾರ ವಶವೆಂದೆನುತ ಮರುಗಿದನು ||೧೬|| 

ಏಕೆ ನೃಪತಿ ವೃಥಾ ಮನೋವ್ಯಥೆ 
ಕಾಕಬಳಸಲುಬೇಡ ನೀನವಿ 
ವೇಕಿಯೇ ಸಾಕಿನ್ನು ನಿನಗುಪಕಾರವಂಜದಿರು 
ಲೋಕ ನಿನ್ನನು ಕಾಣದಂತಿರ 
ಬೇಕೆನುತ ಲೇರಿಸಿದೆ ಗರಳವ 
ನೇಕವುಪಕಾರಂಗಳಹವದರಿಂದ ನಿನಗೆಂದ ||೧೭|| 

ಗರಳವಿದು ಸರ್ವಾಂಗದಲಿ ಸಂ 
ಚರಿಸುತಿಹ ಪರಿಯಂತ ರಿಪುಗಳ 
ಶರಜಲಾಗ್ನಿಭುಜಂಗರೋಗಾದಿಗಳ ಭಯವಿಲ್ಲ 
ನಿರುತವಿದು ವಜ್ರಾಂಗಿ ಬೇಡಿ 
ನ್ನರಸ ಚಿಂತಿಸಬೇಡ ಕಾರ್ಯದ 
ಹೊರಗೆ ತಾನಿದು ಬೇರೆ ಭಯ ಬೇಡಿನ್ನು ನಿನಗೆಂದ ||೧೮||

ಜನಪ ಕೇಳೈ ಧರೆಗೆ ಋತುಪ
ರ್ಣನು ಮಹಾರಾಜೇಂದ್ರ ಗುಣನಿಧಿ 
ಯಿನಕುಲಾಂಬುಧಿ ಚಂದ್ರನಾತನ ಪುರವಯೋಧ್ಯೆಯದು 
ನಿನಗೆ ಬಹುದಕಷಹೃದಯವು ಆ 
ತನಲಿ ನೀನವಗಶ್ವಹೃದಯವ 
ನನುಗೊಳಿಸು ಸಾಕಿನ್ನು ಚಿಂತಿಸಬೇಡ ಹೋಗೆಂದ ||೧೯||

ಪೊಡವಿಪನನೋಲೈಸು ವಾಘೆಯ 
ಪಿಡಿದು ಬಾಹುಕನೆಂಬ ನಾಮದಿ 
ನಡೆಸು ರಥವನು ಹೀನವೃತ್ತಿಯದಲ್ಲ ನಿನಗಿನ್ನು 
ಬಿಡದೆ ಮುನ್ನಿನ ರೂಪು ಬೇಕಾ 
ದಡೆ ನೆನೆವುದಾ ಪಕ್ಷಿಗಳ ಹ 
ಚ್ಚಡವನೀವುವು ಧರಿಸಲಡಗುವುದೀ ಕುರೂಪಿತನ ||೨೦||

ನಿನ್ನ ಹವಣೇ ಪೂರ್ವದಲಿ ಭಿ 
ಕ್ಷಾನ್ನವನು ಬೇಡಿದನು ಪಶುಪತಿ 
ಪನ್ನಗಾರಿಧ್ವಜನು ಕಾಯ್ದನು ಪಶುಗಳಡವಿಯಲಿ 
ಉನ್ನತೈಶ್ವರ್ಯಪ್ರದನು ಶತ 
ಮನ್ಯು ಬನದಲಿ ನವೆಯನೇ ಸಾ 
ಕಿನ್ನು  ಮನನೋಯದಿರು ಚಿತ್ತೈಸೆಂದನುರಗಪತಿ ||೨೧||

ಪರಮ ಸತ್ಯವ್ರತದೊಳಾ ಪು 
ಷ್ಕರನ ಗೆಲಿದುನ್ನತದ ರಾಜ್ಯದ 
ಸಿರಿ ಮಿಗಲು ಸಾಮ್ರಾಜ್ಯವಾಳುವೆ ನಿನ್ನ ಸತಿಸಹಿತ 
ವರವನಿತ್ತೆನು ನಿನಗೆಯೆಂದುಪ 
ಚರಿಸಿ ಕಾರ್ಕೋಟಕನು ನಳನೃಪ 
ಗರುಹುತಾಕ್ಷಣ ಮಾಯವಾದನು ರಾಯ ಕೇಳೆಂದ ||೨೨||

ಬಲಿದ ಚಿಂತೆಯ ಮನದ ದುಗುಡದ 
ನಳನೃಪತಿ ಕಾನನದಿ ಬರುತಿರೆ 
ಮಲೆತು ತೊಲಗಿದ ದುಷ್ಟಮೃಗಗಳಕಂಡು ನಸುನಗುತ 
ಹಲವು ಗಿರಿಗುಹೆ ಗಹ್ವರಂಗಳ
ಕಳೆದು ಮುಂದಣ ಜನಪದಂಗಳ 
ಬಳಿವಿಡಿದು ನಡೆತಂದನಲಸದೆ ಹಲವು ಯೋಜನವ ||೨೩||

ಹೊಳೆವ ಮಿಸುನಿಯ ರತ್ನನಿಚಯದ 
ನೆಲೆನೆಲೆಯ ಸೌಧಾಗ್ರದಲಿ ಪ್ರ 
ಜ್ವಲಿಪ ಹೇಮದ ಕಲಶಗಳ ರವಿಚಂದ್ರಶಾಲೆಗಳ 
ಲಲನೆಯರ ನಾನಾ ವಿನೋದದ 
ಹಲವು ಗೋಪುರಶಿಖರದಗಣಿತ 
ನೆಲೆಯ ವ್ಣಿಸಲರಿದಯೋಧ್ಯಾಪುರವು ರಂಜಿಸಿತು ||೨೬||

ಅರಸುಗಳು ಭೂಸುರರು ಮಿಗೆ ವೈ 
ಶ್ಯರು ಚತುರ್ಥರು ನಾಗರೀಕದ 
ಪುರಜನರು ಸಂದಣಿಸಿತಗಣಿತ ರಾಜವೀಧದಿಯಲಿ 
ಕರಿ ತುರಗ ರಥ ಪಾಯದಳ ಗೋ 
ಚರಿಸಿತಂಗಡಿ ನವವಿಧಾನದಿ 
ಮೆರೆವಯೋಧ್ಯಾಪುರವ ಕಂಡನು ತೂಗಿದನು ಶಿರವ ||೨೭||

ಬಂದು ಹೊಕ್ಕನು ಪುರವ ಮೆರೆವತಿ 
ಚಂದವನು ನೆರೆನೋಡಿ ಮನದೊಳ 
ಗಂದು ಕೊಂಡಾಡಿದನು ಋತುಪರ್ಣನ ಮಹಾ ಸಿರಿಯ 
ತಂದುದೇ ವಿಧಿ ತನ್ನನಿಲ್ಲಿಗೆ 
ಮಂದಭಾಗ್ಯನು ತಾನೆನುತ ಮನ 
ನೊಂದು ನೆನೆದನು ವರಪುರಾಧಿಪ ಚೆನ್ನಕೇಶವನ||೨೮||

ನೋಡಿ
ನಳಚರಿತ್ರೆ- ಸಂಧಿಗಳು>:೧೨೩೪೫೬೭೮೯
ನೋಡಿ

ವರ್ಗ:ಕನಕದಾಸರ ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ